ಫೈಲೇರಿಯ ಬೇನೆ - 
ಫೈಲೇರಿಯ ಜಾತಿಗೆ ಸೇರಿದ ಫೈ. ಬ್ಯಾನ್ಸ್ ಕ್ರಾಫ್ಟಿ, ಫೈ.ಮಲೆ, ಫೈ.ಲೋವಲೋವ ಎಂಬ ದುಂಡು ಹುಳುಗಳ (ನೆಮಟೋಡ) ಸೋಂಕಿನಿಂದ ಉಂಟಾಗುವ ರೋಗಗಳು (ಫೈಲೇರಿಯಾಸಿಸ್). ನಾರುಹುಣ್ಣನ್ನು ಉಂಟುಮಾಡುವ ಗಿನಿವರ್ಮ್, ಸೊಂಟ, ಕಂಕುಳು, ಎದೆ ಮುಂತಾದ ಸ್ಥಳಗಳಲ್ಲಿ ದಪ್ಪ ಗೋಲಿ ಗಾತ್ರದ ನೀರುಗೆಡ್ಡೆಗಳನ್ನು (ಸಿಸ್ಟ್ಸ್) ಉಂಟುಮಾಡುವ ಅಪೋಸರ್ಕಸ್ ವಾಲ್‍ವ್ಯುಲಸ್, ಅಲ್ಲದೆ ಅಕ್ಯಾಥೊ ಸಿಲೋನಿಮ ಪರ್‍ಸ್ವನ್ಸ್, ಮ್ಯಾನ್ಸೊನೆಲ್ಲ ಒಸ್ಸಾರ್ಡಿ ಇತ್ಯಾದಿ ದುಂಡು ಹುಳುಗಳನ್ನೂ ಫೈಲೇರಿಯ ಜಾತಿಗೆ ಸೇರಿದವೆಂದು ಗಣಿಸುವುದಿದೆ. ಆದರೆ ಸಾಮಾನ್ಯವಾಗಿ ಫೈಲೇರಿಯ ಬೇನೆ ಎಂದರೆ ಮೇಲೆ ಹೇಳಿದ ಮೂರು ಬಗೆಯ ಫೈಲೇರಿಯ ಸೋಂಕಿನಿಂದ ಉಂಟಾದ ಬೇನೆ ಎಂದೇ ಅರ್ಥ. ಸೋಂಕು ಒಬ್ಬರಿಂದ ಒಬ್ಬರಿಗೆ ಸೊಳ್ಳೆ, ಕ್ರೆಸಾಪ್ಸ್ ಮುಂತಾದ ಕೀಟಗಳಿಂದ ಹರಡುತ್ತದೆ. ರೋಗಿಯನ್ನು ಕೀಟ ಕಚ್ಚಿ ರಕ್ತ ಹೀರಿದಾಗ ಆತನ ರಕ್ತದಲ್ಲಿರುವ ರೋಗಕ್ರಿಮಿಗಳ ಅರ್ಧ ಬೆಳೆದ ಮರಿಗಳು (ಇವಕ್ಕೆ ಮೈಕ್ರೊ ಫೈಲೇರಿಯಗಳೆಂದು ಹೆಸರು) ಅದರ ಜಠರವನ್ನು ಪ್ರವೇಶಿಸುತ್ತವೆ. ಇವು ಕೊಂಚಕಾಲ ಅಲ್ಲಿಯೇ ತಂಗಿ ಪೂರ್ಣವಾಗಿ ಬೆಳೆದ ಮರಿಗಳಾಗಿ ಕೀಟದ ಬಾಯಿ ಲಾಲಾಗ್ರಂಥಿಗಳನ್ನು ಸೇರುತ್ತವೆ. ಕೀಟ ಇನ್ನೊಮ್ಮೆ ರಕ್ತ ಹೀರಲು ಈ ವ್ಯಕ್ತಿಯನ್ನು ಕಡಿದಾಗ ಪೂರ್ತಿ ಬೆಳೆದ ಮರಿಕ್ರಿಮಿಗಳು ಈತನ ದೇಹ ಹೊಕ್ಕು ಕ್ರಮಿಸುತ್ತ ತಮ್ಮ ನೆಲೆಗೆ ಬಂದು ಸೇರಿ ದೊಡ್ಡ ಹೆಣ್ಣು ಹಾಗೂ ಗಂಡು ಹುಳುಗಳಾಗುತ್ತವೆ. ಇವುಗಳ ಸಂತಾನೋತ್ಪತ್ತಿಯ ಫಲವಾಗಿ ಮರಿಗಳು ಅಸಂಖ್ಯಾತವಾಗಿ ಹುಟ್ಟಿ ಅರ್ಧ ಮಾತ್ರ ಬೆಳೆದು ವ್ಯಕ್ತಿಗೆ ರೋಗಕಾರಕಗಳಾಗಿ ಪರಿಣಮಿಸುತ್ತವೆ ಮತ್ತು ಆ ವ್ಯಕ್ತಿಯ ರಕ್ತದಲ್ಲೂ ಇರುತ್ತವೆ.

	ಫೈಲೇರಿಯ ಬೇನೆಯನ್ನು ಬಲು ಹಿಂದಿನ ಕಾಲದಿಂದಲೂ ಗುರುತಿಸಲಾಗಿದೆ. ಪ್ರಾಚೀನ ಭಾರತದ ವೈದ್ಯರೂ ಪ್ರಾಚೀನ ಗ್ರೀಕ್ ವೈದ್ಯರೂ ಇದನ್ನು ಗುರುತಿಸಿದ್ದರೆಂದು ತಿಳಿದುಬಂದಿದೆ. ಆದರೆ ಇದರ ಕಾರಣ ವೈಜ್ಞಾನಿಕವಾಗಿ ತಿಳಿದುಬಂದಿದ್ದು ಈಚೆಗೇ. 1709 ರಲ್ಲಿ ಕ್ಲಾರ್ಕ್ ಎಂಬ ವೈದ್ಯ ಈ ಬೇನೆಯನ್ನು ಕೊಚ್ಚಿ ಪ್ರಾಂತ್ಯದಲ್ಲಿ ಗುರುತಿಸಿ ಅದಕ್ಕೆ ಕೊಚ್ಚಿಕಾಲು ಎಂದು ಹೆಸರಿಟ್ಟಿದ್ದ. ಬ್ರೆಜಿûಲಿನಲ್ಲಿ ಈ ಬೇನೆಯಿಂದ ನರಳುತ್ತಿದ್ದವರ ಮೂತ್ರದಲ್ಲಿ ಅತಿಸೂಕ್ಷ್ಮ ಕ್ರಿಮಿಗಳಿದ್ದುದನ್ನು ವುಚಿರರ್ ಎಂಬ ವೈದ್ಯ ತೋರಿಸಿದ (1866). ಇವೇ ಸೂಕ್ಷ್ಮಕ್ರಿಮಿಗಳು ಭಾರತದಲ್ಲಿಯ ರೋಗಿಗಳ ರಕ್ತದಲ್ಲಿಯೂ ಇದ್ದುದನ್ನು ಲೆವಿಸ್ ಪತ್ತೆಹಚ್ಚಿದ (1872). ನಾಲ್ಕು ವರ್ಷಗಳ ತರುವಾಯ ಆಸ್ಟ್ರೇಲಿಯದ ಬ್ರಿಸ್‍ಬೇನಿನಲ್ಲಿ ಬ್ಯಾನ್‍ಕ್ರಾಫ್ಟ್ ಎಂಬ ವೈದ್ಯನ ವ್ಯಾಸಂಗ ಫೈಲೇರಿಯ ಬೇನೆಯಿಂದ ನರಳುವವರಲ್ಲಿ ದೊಡ್ಡ ಹೆಣ್ಣು ದುಂಡು ಹುಳು ಇರುವುದನ್ನು ತೋರಿಸಿಕೊಟ್ಟಿತು. ಈ ಸೂಕ್ಷ್ಮಕ್ರಿಮಿಗಳು ರೋಗಿಯ ರಕ್ತದಲ್ಲಿ ರಾತ್ರಿಕಾಲಮಾತ್ರ ಕಾಣಿಸಿಕೊಳ್ಳುತ್ತವೆಂದೂ ಹಗಲು ಇವು ಫುಪ್ಫುಸ ಮುಂತಾದ ದೇಹದ ಒಳ ಅಂಗಗಳಲ್ಲಿ ಅಡಗಿರುತ್ತವೆಂದೂ ಮ್ಯಾನ್ಸನ್ 1878ರಲ್ಲಿ ವಿಶದಪಡಿಸಿದ. ಭಾರತದ ಕೆಲವು ಫೈಲೇರಿಯ ರೋಗಿಗಳಲ್ಲಿ ಬೆಳೆದು ಬಲಿತ ಫೈಲೇರಿಯ ಮಲೆಕ್ರಿಮಿ ಇರುವುದನ್ನು ಎಸ್. ಎಸ್. ರಾವ್ ಮತ್ತು ಮೇಪಲ್‍ಸ್ಟೋನ್ ಎಂಬವರು ತೋರಿಸಿದರು. ಫೈ.ಲೋವಲೋವದಲ್ಲಿ ಅರ್ಧ ಬೆಳೆದ ಮರಿಗಳು ಹಗಲು ರಕ್ತದಲ್ಲಿದ್ದು ರಾತ್ರಿ ಹೊತ್ತು ಒಳ ಅಂಗಗಳಲ್ಲಿ ಅಡಗಿರುತ್ತವೆ.

	ಫೈ.ಬ್ಯಾನ್‍ಕ್ರಾಫ್ಟಿಯ ಸೋಂಕು ಮುಖ್ಯವಾಗಿ ಪ್ರಪಂಚದ ಉಷ್ಣವಲಯದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಕ್ಯೂಲೆಕ್ಸ್ ಫ್ಯಾಟಿಗಾನ್ಸ್ ಮತ್ತು ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಗಳು ಇದನ್ನು ಹರಡುತ್ತವೆ. ಭಾರತದಲ್ಲಿ ಈ ಸೋಂಕು ಹೊಳೆ ತಡಿಯಿಂದ ಜೌಗು ಪ್ರದೇಶಗಳಲ್ಲಿ ಮತ್ತು ಸಮುದ್ರ ತೀರಪ್ರದೇಶಗಳಲ್ಲಿ-ಮುಖ್ಯವಾಗಿ ಪಶ್ಚಿಮತೀರದ ದಕ್ಷಿಣಭಾಗ ಹಾಗೂ ಗಂಗಾನದಿಯ ಅಳಿವೆ ಪ್ರದೇಶಗಳಲ್ಲಿ(ಕಂಡುಬರುತ್ತದೆ. ಫೈ. ಮಲೈ ಸೋಂಕು ಮುಖ್ಯವಾಗಿ ಇಂಡಿಯಾ ಪರ್ಯಾಯ ದ್ವೀಪ, ಚೀನ ಮತ್ತು ಮಲೇಷ್ಯಗಳಲ್ಲಿ ಕಂಡುಬರುತ್ತದೆ. ಇದನ್ನು ಕೆಲವು ಜಾತಿಯ ಅನಾಫಿಲೀಸ್ ಸೊಳ್ಳೆಗಳು ಹರಡುತ್ತವೆ. ಫೈ. ಲೋವಲೋವದ ಸೋಂಕು ಪ್ರಮುಖವಾಗಿ ಪಶ್ಚಿಮ ಆಫ್ರಿಕದಲ್ಲಿ ಕಂಡುಬರುತ್ತದೆ. ಇದನ್ನು ಕ್ರೈಸಾಪ್ಸ್ ಜಾತಿಗೆ ಸೇರಿದ ಕೀಟಗಳು ಹರಡುತ್ತವೆ. ಪ್ರಾಯಕ್ಕೆ ಬಂದ ಫೈಲೇರಿಯ ಹುಳುಗಳಲ್ಲಿ ಹೆಣ್ಣೇ ದೊಡ್ಡದು. ಹೆಣ್ಣಿಗಿಂತಲೂ ಗಂಡು ಬಲು ಚಿಕ್ಕದಾಗಿದ್ದು ಸಾಮಾನ್ಯವಾಗಿ ಹೆಣ್ಣಿನ ದೇಹಕ್ಕೆ ತೊಡರಿಕೊಂಡಿರುವಂತೆ ಸುತ್ತಿಕೊಂಡಿರುತ್ತದೆ. ಫೈ. ಬ್ಯಾನ್‍ಕ್ರಾಫ್ಟಿ ಹೆಣ್ಣು ಹುಳು 5-10 ಸೆಂಮೀ ಉದ್ದವಾದ ಟ್ವೈನ್ ದಾರದಂತೆ ಇರುತ್ತದೆ. ಇದು ಐದಾರು ವರ್ಷ ಪರ್ಯಂತ ಸುಮಾರು 1 ಮಿಮೀನಷ್ಟು ಉದ್ದವಿರುವ ಅತಿಸೂಕ್ಷ್ಮಮರಿಗಳನ್ನು ಅಸಂಖ್ಯಾತವಾಗಿ ಹಾಕುತ್ತಲೇ ಇರುತ್ತದೆ. ರೋಗಿಯ ರಕ್ತದಲ್ಲಿ ರಾತ್ರಿ ಹೊತ್ತು ಕಂಡುಬರುವವೂ ಸೊಳ್ಳೆ ರೋಗಿಯ ರಕ್ತಹೀರಿದಾಗ ಅದರ ದೇಹವನ್ನು ಹೊಗುವವೂ ಈ ಮರಿಗಳೇ. ಸೊಳ್ಳೆಯ ದೇಹದಲ್ಲಿ ಇವು ಸುಮಾರು ಎರಡು ವಾರ ಬೆಳೆದು ಅದರ ಲಾಲಾಗ್ರಂಥಿ, ಬಾಯಿಗಳನ್ನು ಸೇರಿ ಪುನಃ ಮಾನವನ ದೇಹವನ್ನು ಪ್ರವೇಶಿಸಲು ಸಿದ್ಧವಾಗುತ್ತವೆ. ವ್ಯಕ್ತಿಯನ್ನು ಸೊಳ್ಳೆ ಕಚ್ಚಿದಾಗ ಮರಿಗಳು ಅವನ ದುಗ್ಧರಸನಾಳಗಳನ್ನು ಸೇರಿ ಅವುಗಳ ಮೂಲಕ ದುಗ್ಧರಸ ಗ್ರಂಥಿಗಳಲ್ಲಿ ತಂಗಿ ಬೆಳೆದು ಪ್ರಾಯದ ಗಂಡು ಮತ್ತು ಹೆಣ್ಣು ಹುಳುಗಳಾಗುತ್ತವೆ. ಹೀಗೆ ಬೆಳೆದು ಪ್ರಾಯಕ್ಕೆ ಬರಲು ಸುಮಾರು ಒಂದು ಒಂದೂವರೆ ವರ್ಷಗಳಾಗುತ್ತವೆ. ಅನಂತರ ಹೆಣ್ಣು ಸಣ್ಣ ಮರಿಗಳನ್ನು ಹಾಕುವುದಕ್ಕೆ ಪ್ರಾರಂಭಿಸುತ್ತದೆ. ಇವು ದುಗ್ಧರಸವಾಹಿನಿಯ ಮೂಲಕವೇ ಒಯ್ಯಲ್ಪಡುತ್ತ ರಕ್ತವನ್ನು ಪ್ರವೇಶಿಸುತ್ತವೆ. ಸೋಂಕು ಉಂಟಾದ ಮೇಲೆ ಈ ಮರಿಗಳು ಹುಟ್ಟುವತನಕ ವ್ಯಕ್ತಿಗೆ ಯಾವ ತೊಂದರೆಯೂ ಇರುವುದಿಲ್ಲ. ಮರಿಗಳು ಹುಟ್ಟಿ ರಕ್ತನಾಳಗಳಲ್ಲಿ ಮತ್ತು ದುಗ್ಧರಸನಾಳಗಳಲ್ಲಿ ಶೇಖರವಾಗುವುದಕ್ಕೆ ಪ್ರಾರಂಭಿಸಿದ ಬಳಿಕ ತೊಂದರೆಗಳು ಉದ್ಭವಿಸುತ್ತವೆ. ಇವು ಅತಿ ಬೆಳೆದ ಹುಳುಗಳಿಂದ ಉತ್ಪನ್ನವಾದ ವಿಷವಸ್ತುಗಳಿಂದ ಜನಿಸಿ ಮೊದಮೊದಲು ದುಗ್ಧರಸನಾಳಗಳಲ್ಲಿಯೂ ಗ್ರಂಥಿಗಳಲ್ಲಿಯೂ ಉರಿಯೂತ ಪ್ರಾರಂಭವಾಗುತ್ತದೆ. ತತ್ಫಲವಾಗಿ ಕೈಕಾಲುಗಳ ಚರ್ಮದ ಮೇಲೆ ಕೆಂಪಾದ ಗೆರೆಗಳು (ಲಿಂಫಾಂಜೈಟಿಸ್) ಮೂಡುತ್ತವೆ. ಈ ನಾಳಗಳು ಸಂಕೋಚಿಸುವುದರಿಂದ ದುಗ್ಧರಸ ಹರಿಯುವುದಕ್ಕೆ ಅಡಚಣೆ ಉಂಟಾಗಿ ಕೈಕಾಲುಗಳು ಊದಿಕೊಳ್ಳುತ್ತವೆ. ಊತ ಹೊರಜನನಾಂಗಗಳಲ್ಲಿಯೂ ಕಂಡುಬರಬಹುದು. ವೃಷಣ, ಸ್ತನಗಳು, ಅಂಡಾಶಯಗಳಲ್ಲೂ ಉರಿಯೂತ ಸಾಮಾನ್ಯ. ಈ ಕಾಲದಲ್ಲಿ ವೃಷಣಕೋಶದಲ್ಲಿ ನೀರು ತುಂಬಿಕೊಳ್ಳಬಹುದು (ಹೈಡ್ರೊಸೀಲ್). ಮೂತ್ರದಲ್ಲಿ ಮೇದಸ್ಸಿನ ಅಂಶ ಕಂಡುಬರಬಹುದು (ಕೈಲ್ಯೂರಿಯ). ಇದೇ ಕಾಲದಲ್ಲಿ ತೀವ್ರಜ್ವರ ಬಂದು ಮೂರು ನಾಲ್ಕು ದಿವಸಗಳಿದ್ದು ಇಳಿಯಬಹುದು. ಇದಕ್ಕೆ ಫೈಲೇರಿಯ ಜ್ವರ ಎಂದೇ ಹೆಸರು. ಅನೇಕ ಬಾರಿ ಹೀಗೆ ಜ್ವರ ಊತಗಳು ಉಂಟಾಗುವುದು ಸಾಮಾನ್ಯ. ಕೊನೆಗೆ ಜ್ವರ ನಿಂತು ಹೋಗಿ ಊತಮಾತ್ರ ಉಳಿದುಕೊಳ್ಳುತ್ತದೆ. ಬರಬರುತ್ತ ಊತ ಹೆಚ್ಚಾಗುತ್ತದೆ. ಅಲ್ಲದೆ ಊದಿದ ಭಾಗ ಮರದ ಕೊರಡಿನಂತೆ ಗಡುಸಾಗುತ್ತದೆ. ಆ ಭಾಗದ ಚರ್ಮವೂ ದಪ್ಪವಾಗಿ ಒರಟಾಗಿ ಆನೆ ಚರ್ಮದಂತಾಗುತ್ತದೆ. ಕಾಲಿನಲ್ಲಿ ಈ ರೀತಿ ಆಗುವುದು ಅತಿ ಸಾಮಾನ್ಯವಾದ್ದರಿಂದ ಈ ಬೇನೆಗೆ ಆನೆಕಾಲು ರೋಗವೆಂಬ ಹೆಸರು ಬಂದಿದೆ. ಹಿಂದಿನ ಆಯುರ್ವೇದಾಚಾರ್ಯರು ಶಿಲಾಪಾದವೆಂದು ವರ್ಣಿಸಿರುವ ಸ್ಥಿತಿಯೂ ಇದೇ ಇರಬೇಕು. ಫೈ. ಲೋವಲೋವದ ಸೋಂಕಿನಲ್ಲಿ ಇಂಥ ತೊಂದರೆಗಳು ಉದ್ಭವಿಸುವುದು ಸಾಮಾನ್ಯವಾಗಿ ಅಪರೂಪ. ಆದರೆ ಪ್ರಾಯದ ಹುಳುಗಳೇ ದುಗ್ಧರಸನಾಳ ರಕ್ತನಾಳಗಳಲ್ಲಿ ಸಂಚರಿಸುತ್ತ ಆ ಪ್ರಾಂತ್ಯದಲ್ಲೆಲ್ಲ ಒಂದು ರೀತಿಯ ನವೆಯನ್ನು ಉಂಟುಮಾಡಬಹುದು. ಕಣ್ಣಿನ ಪಾರದರ್ಶಕ ಪೊರೆಯ ಹಿಂದೆಯೂ ಕಾಣಿಸಿಕೊಳ್ಳುವುದಿದೆ. ಅಲ್ಲದೆ ಚರ್ಮದ ಅಡಿ ಅಲ್ಲಲ್ಲಿ ನೆಲಸಿ ನೋವಿಲ್ಲದ ಊತ ಗಂಟುಗಳನ್ನು ಉಂಟುಮಾಡಬಹುದು. ಇವಕ್ಕೆ ಕೆಲಬಾರ್ ಸ್ವೆಲಿಂಗ್ ಎಂದು ಹೆಸರು.

	ಫೈಲೇರಿಯ ಬೇನೆಯನ್ನು ಮೇಲೆ ವಿವರಿಸಿರುವ ಲಕ್ಷಣಗಳಿಂದಲೂ ರಕ್ತಪರೀಕ್ಷೆಯಿಂದಲೂ ಗುರುತಿಸಬಹುದು. ಈ ಬೇನೆಯ ತಡೆ ಹಾಗೂ ಚಿಕಿತ್ಸೆಗಾಗಿ ವಿವಿಧ ಕ್ರಮಗಳನ್ನು ಅನುಸರಿಸುವುದು ಇದೆ. ಫೈಲೇರಿಯ ವಾಹಕ ಕೀಟಗಳನ್ನು ಬೇರೆ ಬೇರೆ ಕ್ರಮಗಳಿಂದ ನಾಶಪಡಿಸುವುದು. ಸೊಳ್ಳೆ ಪರದೆಯನ್ನು ಬಳಸುತ್ತ ಸೊಳ್ಳೆಕಡಿಯದಂತೆ ನೋಡಿಕೊಳ್ಳುವುದು, ಡೈಈಥೈಲ್ ಕಾರ್ಬಜೀನ್ ಮುಂತಾದ ಔಷಧಿಗಳನ್ನು ಕೊಟ್ಟು ಫೈಲೇರಿಯ ರೋಗಿಯನ್ನು ಚಿಕಿತ್ಸಿಸುವುದು. ಈಚೆಗೆ ಐವರ್‍ಮೆಕ್ವಿನ್ ಎಂಬ ಔಷಧಿಯನ್ನು ಕೂಕಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ.		
(ಎನ್.ಬಿ.ಜಿ.; ಕೆ.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ